ಬೆಟ್ಟ ಅಗೆದು ಇಲಿ ಹಿಡಿದಂತಾದ ಎಸ್.ಐ.ಆರ್

ಬೆಟ್ಟ ಅಗೆದು ಇಲಿ ಹಿಡಿದಂತಾದ ಎಸ್.ಐ.ಆರ್
ಲೋಕಸಭಾ ಕ್ಷೇತ್ರಗಳ ಪುನರ್ವಿಂಗಡಣೆ: ದಕ್ಷಿಣ ಭಾರತದ ಧ್ವನಿ ಕುಗ್ಗಿಸಲು ವ್ಯವಸ್ಥಿತ ಷಡ್ಯಂತ್ರ
ನಂಜುಂಡಪ್ಪ.ವಿ
ಬೆಂಗಳೂರು.ಅ.28: ರಾಜ್ಯದಲ್ಲಿ ಎಸ್.ಐ.ಆರ್ ಪ್ರಕ್ರಿಯೆ ಪೂರ್ಣಗೊಂಡಿದೆ. ಒಟ್ಟಾರೆ ಇದು ಬೆಟ್ಟ ಅಗೆದು ಇಲಿ ಹಿಡಿದಂತಾಗಿದೆ. ವಿದೇಶಿಯರು, ವಲಸಿಗರನ್ನು ಹೊರಗಿಡಲು ಎಸ್.ಐ.ಆರ್ ಅಗತ್ಯ ಎಂದು ಬಿಜೆಪಿ ಮತ್ತು ಎನ್.ಡಿ.ಎ ನಾಯಕರು ಬಲವಾಗಿ ಪ್ರತಿಪಾದಿಸುತ್ತಿದ್ದರು. ಆದರೆ ರಾಜ್ಯದಲ್ಲಿ ವಿದೇಶಿಯರ ಸಂಖ್ಯೆ ಒಂದು ಸಾವಿರ ಗಡಿ ದಾಟಿಲ್ಲ. ಒಟ್ಟು 771 ಮತದಾರರ ಪೈಕಿ ನೇಪಾಳದವರು 678. ಒಬ್ಬೇ ಒಬ್ಬ ಬಾಂಗ್ಲಾದೇಶಿ ಪತ್ತೆಯಾಗಿಲ್ಲ. ವಿದೇಶಿಯರನ್ನು, ಅದರಲ್ಲೂ ಬಾಂಗ್ಲಾದೇಶ, ಪಾಕಿಸ್ತಾನದವರನ್ನು ತಮ್ಮ ಗುರಾಣಿ ಮಾಡಿಕೊಂಡು ಎಸ್.ಐ.ಆರ್ ಪರ ವಕಾಲತ್ತು ವಹಿಸುತ್ತಿದ್ದವರಿಗೆ ಎಸ್.ಐ.ಆರ್ ಅಂತಿಮ ಮತದಾರರ ಪಟ್ಟಿ ಸ್ಪಷ್ಟ ಉತ್ತರ ನೀಡಿದೆ.
ಎಸ್.ಐ.ಆರ್ ಅಗತ್ಯವಿಲ್ಲ. ಇದನ್ನು ರದ್ದುಗೊಳಿಸಬೇಕು. ಮುಖ್ಯ ಚುನಾವಣಾ ಆಯುಕ್ತ ಜ್ಞಾನೇಶ್ ಕುಮಾರ್ ರಾಜೀನಾಮೆ ನೀಡಬೇಕು ಎಂದು ಒತ್ತಾಯಿಸಿ ದೇಶಾದ್ಯಂತ ಆಂದೋಲನ ಮುಂದುವರೆದಿದೆ. ಎಸ್.ಐ.ಆರ್ ಅನಾಹುತಗಳು ಸಾಮಾನ್ಯ ಜನರಿಗೆ ಈಗೀಗ ಅರ್ಥವಾಗುತ್ತಿದೆ. ಆಯೋಗದ ಅಂಕಿ ಅಂಶಗಳೇ ಸ್ಪಷ್ಟ ಚಿತ್ರಣ ನೀಡಿವೆ. 75.53 ಲಕ್ಷ ಮತದಾರರು ಎಲ್ಲಿ ಎಂಬುದಕ್ಕೆ ಆಯೋಗ ಸ್ಪಷ್ಟ ಉತ್ತರ ನೀಡಿಲ್ಲ. ಮತದಾರರ ಪಟ್ಟಿ ಪರಿಷ್ಕರಣೆ ನಿರಂತರ ಪ್ರಕ್ರಿಯೆ. ಪಟ್ಟಿಯಿಂದ ಹೊರಗುಳಿದವರು ನಮೂನೆ 6 ನೀಡಿ ಮತದಾರರ ಪಟ್ಟಿಗೆ ಸೇರಿಕೊಳ್ಳಬಹುದು ಎಂದು ಆಯೋಗ ಹೇಳಿದೆ. ಆದರೆ ಲಕ್ಷಗಟ್ಟಲೆ ಅಕ್ರಮ ವಲಸಿಗರು ಬಾಂಗ್ಲಾದೇಶ ಮತ್ತು ಪಾಕಿಸ್ತಾನದಿಂದ ನುಸುಳಿದ್ದಾರೆ ಎಂದು ಗುಲ್ಲೆಬ್ಬಿಸಿ ಎಸ್.ಐ.ಆರ್ ಪ್ರಕ್ರಿಯೆ ಆರಂಭಿಸಲಾಗಿತ್ತು. ಆದರೆ ಅದು ಸಂಪೂರ್ಣ ಸುಳ್ಳು ಎಂದು ಅಂತಿಮ ಮತದಾರರ ಪಟ್ಟಿಯಿಂದ ಸಾಬೀತಾಗಿದೆ.
ಶಿಪ್ಟಿಂಗ್ ಮತ್ತು ಅಬ್ಸೆಂಟ್ ಕೆಟಗರಿ ಮತದಾರರು ಅವರ ಅರ್ಜಿ ಹಾಗೂ ದಾಖಲೆಗಳನ್ನು ಸಲ್ಲಿಸಲು ಕಾಲಾವಕಾಶ ವಿಸ್ತರಿಸಬೇಕೆಂದು ಹಲವು ಬಾರಿ ಕೇಳಿದರೂ ಆಯೋಗ ಮನ್ನಿಸಲಿಲ್ಲ. ಇತರ ರಾಜ್ಯಗಳಂತೆ ದೊಡ್ಡ ಸಂಖ್ಯೆಯ ಮತದಾರರು ಅತಂತ್ರರಾಗುವ ಸ್ಥಿತಿ ರಾಜ್ಯದಲ್ಲಿ ನಿರ್ಮಾಣವಾಗಿದೆ. ವಾಸ್ತವವಾಗಿ ಶಿಫ್ಟಿಂಗ್ ಎನ್ನುವ ವಿಧಾನವೇ ಅಯೋಮಯವಾಗಿದೆ. ಯಾವುದೇ ಮತದಾರರು ತಮ್ಮ ಪ್ರಜಾಪ್ರಭುತ್ವ ಹಕ್ಕುಗಳನ್ನು ಕಳೆದುಕೊಳ್ಳ ಬಾರದು. ಎಸ್.ಐ.ಆರ್ ಪ್ರಕ್ರಿಯೆ ಅತ್ಯಂತ ಪ್ರಜಾಪ್ರಭುತ್ವ ವಿರೋಧಿ ವಿಧಾನವಾಗಿದ್ದು, ಅದನ್ನು ರದ್ದುಪಡಿಸಿದರೆ ಮಾತ್ರ ಜನತೆಯ ಪ್ರಜಾಪ್ರಭುತ್ವ ಹಕ್ಕನ್ನು ಕಾಪಾಡಬಹುದು ಎಂದು ದೇಶಾದ್ಯಂತ ನಡೆಯುತ್ತಿರುವ ಪ್ರತಿಭಟನೆಗಳು ಇದೀಗ ಎಲ್ಲರ ಕಣ್ತೆರೆಸುತ್ತಿದೆ. ಈ ಹಿನ್ನೆಲೆಯಲ್ಲಿ, ಬೃಹತ್ ಪ್ರಮಾಣದ ಮತದಾರರ ಹೆಸರುಗಳ ರದ್ದತಿಯ ವಿರುದ್ಧ ಇಂಡಿಯಾ ಕೂಟದ ಪಕ್ಷಗಳು ನವೆಂಬರ್ 5 ರಂದು ಬೆಂಗಳೂರಿನಲ್ಲಿ ಪ್ರತಿಭಟನೆಗೆ ಸಜ್ಜಾಗಿದೆ.
ಎಸ್.ಐ.ಆರ್ ನಂತರ ಮುಂದಿನ ವರ್ಷದ ಆರಂಭದಲ್ಲಿ ದೇಶಾದ್ಯಂತ ಜನಗಣತಿ ನಡೆಯಲಿದ್ದು, ನಂತರ ಕ್ಷೇತ್ರ ಪುನರ್ ವಿಂಗಡಣೆ, ಮಹಿಳಾ ಮೀಸಲಾತಿ ಜಾರಿಗೆ ಕೇಂದ್ರದ ಎನ್.ಡಿ.ಎ ಸರ್ಕಾರ ಸಜ್ಜಾಗಿದೆ. ಇದಕ್ಕಾಗಿ ಸಂಸತ್ ಅಧಿವೇಶನ ಕರೆಯುತ್ತಿದೆ. ಆದರೆ ಎಸ್.ಐ.ಆರ್ ಅಂತಿಮ ವರದಿ ನೋಡಿದರೆ ಕರ್ನಾಟಕಕ್ಕೆ ಕ್ಷೇತ್ರ ಪುನರ್ ವಿಂಗಡಣೆ ಮರಣ ಶಾನವಾಗುವ ಸಾಧ್ಯತೆ ಇದೆ. ವಾಸ್ತವವಾಗಿ ಕರ್ನಾಟಕದಲ್ಲಿ ಹದಿನೈದು ಲೋಕಸಭಾ ಕ್ಷೇತ್ರಗಳ ಸಂಖ್ಯೆ ಹೆಚ್ಚಬಹುದು ಎಂಬ ನಿರೀಕ್ಷೆ ಇತ್ತು. ಕ್ಷೇತ್ರಗಳ ಸಂಖ್ಯೆ 40 ಸನಿಹ ಬರಬಹುದು ಎನ್ನಲಾಗಿತ್ತು. ಜನಸಂಖ್ಯೆ ನಿಯಂತ್ರಿಸಿದ ರಾಜ್ಯಗಳಿಗೆ ಶಿಕ್ಷೆ ದೊರೆಯುವುದು ಖಚಿತವಾಗಿದೆ. ಅಭಿವೃದ್ಧಿಯಲ್ಲಿ ಮುಂಚೂಣಿಯಲ್ಲಿರುವ ದಕ್ಷಿಣ ಭಾರತಕ್ಕೆ ಲೋಕಸಭಾ ಕ್ಷೇತ್ರಗಳ ನಿಗದಿಯಲ್ಲಿ ಅನ್ಯಾಯವಾಗಲಿದೆ. ಇಂತಹ ಪ್ರಮುಖ ಪ್ರಕ್ರಿಯೆಯಲ್ಲಿ ಸಂವಿಧಾನಾತ್ಮಕ ಭರವಸೆ ಇಲ್ಲದಂತಾಗಿದೆ. ಜನಗಣತಿ, ಕ್ಷೇತ್ರ ಪುನರ್ ವಿಂಗಡಣೆ ನಡೆಯುವುದು ಖಚಿತವಾಗಿದೆ. ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಪ್ರತಿಯೊಬ್ಬ ನಾಗರಿಕನ ಮತಕ್ಕೂ ಸಮಾನ ಮೌಲ್ಯವಿದೆ. ಆದರೆ ಆ ಮತದ ರಾಜಕೀಯ ಪ್ರಾತಿನಿಧ್ಯವನ್ನು ನಿರ್ಧರಿಸುವ ಕ್ಷೇತ್ರ ಪುನರ್ವಿಂಗಡಣೆಯ ಪ್ರಕ್ರಿಯೆ ಈಗ ದೇಶದ ರಾಜಕೀಯ ವಲಯದಲ್ಲಿ ಮಹತ್ವದ ಚರ್ಚೆಗೆ ಕಾರಣವಾಗಿದೆ. ಮತದಾರರ ಪಟ್ಟಿಗಳ ವಿಶೇಷ ತೀವ್ರ ಪರಿಷ್ಕರಣೆ ಮುಂಬರುವ ಜನಗಣತಿ ಮತ್ತು ಅದರ ನಂತರ ನಡೆಯಬಹುದಾದ ಕ್ಷೇತ್ರ ಪುನರ್ವಿಂಗಡಣೆ ಪ್ರಕ್ರಿಯೆಗಳನ್ನು ಪ್ರತ್ಯೇಕವಾಗಿ ಅರ್ಥಮಾಡಿಕೊಳ್ಳುವ ಜೊತೆಗೆ, ಅವುಗಳ ನಡುವಿನ ಸಂಬಂಧ ಮತ್ತು ಪರಿಣಾಮಗಳ ಬಗ್ಗೆಯೂ ಗಂಭೀರವಾಗಿ ಚಿಂತಿಸಬೇಕಿದೆ.
ಈ ಎಲ್ಲದರ ನಡುವೆ ಬಿಜೆಪಿ ಒಳ ವಲಯದಲ್ಲಿ ಮುಂದಿನ ಲೋಕಸಭಾ ಚುನಾವಣೆಗೆ ವ್ಯಾಪಕ ಸಿದ್ಧತೆಗಳು ನಡೆಯುತ್ತಿವೆ. ಮಹಿಳಾ ಮೀಸಲು, ಕ್ಷೇತ್ರ ಪುನರ್ ವಿಂಗಡಣೆ ಪ್ರಕ್ರಿಯೆಗೆ ಬಿಜೆಪಿ ಐಟಿ ಸೆಲ್ ನಲ್ಲಿ ಈಗಾಗಲೇ ನೀಲ ನಕ್ಷೆ ಸಿದ್ಧವಾಗಿದೆ. ತಮಗೆ, ತಮ್ಮ ಮಿತ್ರಪಕ್ಷಗಳಿಗೆ ಅನುಕೂಲ ಮಾಡಿಕೊಡಲು ಬಿಜೆಪಿ ರಣತಂತ್ರ ರೂಪಿಸಿದೆ. ವಿಶೇಷವಾಗಿ ಕರ್ನಾಟಕ, ತಮಿಳುನಾಡು, ಕೇರಳ, ಆಂಧ್ರಪ್ರದೇಶ ಮತ್ತು ತೆಲಂಗಾಣ ಸೇರಿದಂತೆ ದಕ್ಷಿಣ ಭಾರತದ ರಾಜ್ಯಗಳಿಗೆ ಕ್ಷೇತ್ರ ಪುನರ್ವಿಂಗಡಣೆಯು ಕೇವಲ ಚುನಾವಣಾ ತಾಂತ್ರಿಕ ಪ್ರಕ್ರಿಯೆಯಲ್ಲ. ಅದು ರಾಜಕೀಯ ಪ್ರಾತಿನಿಧ್ಯ, ಒಕ್ಕೂಟ ವ್ಯವಸ್ಥೆಯ ಸಮತೋಲನ ಮತ್ತು ರಾಜ್ಯಗಳ ಹಕ್ಕುಗಳಿಗೆ ಸಂಬಂಧಿಸಿದ ಪ್ರಮುಖ ಪ್ರಶ್ನೆಯಾಗಿದೆ. ಜನಗಣತಿಯು ದೇಶದ ಜನಸಂಖ್ಯೆ ಮತ್ತು ಅದರ ಸಾಮಾಜಿಕ, ಆರ್ಥಿಕ ಹಾಗೂ ಭೌಗೋಳಿಕ ಸ್ವರೂಪದ ಕುರಿತು ಅಧಿಕೃತ ಅಂಕಿಅಂಶಗಳನ್ನು ಒದಗಿಸುತ್ತದೆ. ಕ್ಷೇತ್ರ ಪುನರ್ವಿಂಗಡಣೆಯು ಜನಸಂಖ್ಯೆ, ಕಾನೂನುಬದ್ಧ ಮಾನದಂಡಗಳು ಮತ್ತು ಸಂವಿಧಾನಾತ್ಮಕ ವ್ಯವಸ್ಥೆಯ ಆಧಾರದಲ್ಲಿ ಚುನಾವಣಾ ಕ್ಷೇತ್ರಗಳ ಗಡಿಗಳನ್ನು ಮರುನಿರ್ಧರಿಸುವ ಪ್ರಕ್ರಿಯೆ. ಜನಗಣತಿಯ ನಂತರ ಕ್ಷೇತ್ರಗಳ ಮರುಹಂಚಿಕೆ ಹೇಗೆ ನಡೆಯಲಿದೆ ಎಂಬುದು ದೇಶದ ವಿವಿಧ ರಾಜ್ಯಗಳ ರಾಜಕೀಯ ಪ್ರಾತಿನಿಧ್ಯಕ್ಕೆ ಸಂಬಂಧಿಸಿದ ಪ್ರತ್ಯೇಕ ಪ್ರಶ್ನೆಯಾಗಿದೆ.
ದಕ್ಷಿಣ ಭಾರತದ ರಾಜ್ಯಗಳು ದಶಕಗಳಿಂದ ಶಿಕ್ಷಣ, ಆರೋಗ್ಯ, ಕುಟುಂಬ ಕಲ್ಯಾಣ, ಮಹಿಳಾ ಸಬಲೀಕರಣ ಮತ್ತು ಜನಸಂಖ್ಯೆ ನಿಯಂತ್ರಣದ ಕ್ಷೇತ್ರಗಳಲ್ಲಿ ಗಮನಾರ್ಹ ಸಾಧನೆ ಮಾಡಿವೆ. ಅನೇಕ ದಕ್ಷಿಣ ರಾಜ್ಯಗಳು ಫಲವತ್ತತೆ ದರವನ್ನು ಕಡಿಮೆ ಮಾಡುವಲ್ಲಿ ಮತ್ತು ಮಾನವ ಅಭಿವೃದ್ಧಿಯ ವಿವಿಧ ಸೂಚ್ಯಂಕಗಳಲ್ಲಿ ಉತ್ತಮ ಸಾಧನೆ ಮಾಡುವಲ್ಲಿ ಯಶಸ್ವಿಯಾಗಿವೆ. ಇದೀಗ ಜನಸಂಖ್ಯೆಯ ಪ್ರಮಾಣವನ್ನು ಆಧಾರವಾಗಿಟ್ಟುಕೊಂಡು ಲೋಕಸಭಾ ಸ್ಥಾನಗಳನ್ನು ಮರುಹಂಚಿಕೆ ಮಾಡಿದರೆ, ಜನಸಂಖ್ಯೆ ವೇಗವಾಗಿ ಹೆಚ್ಚುತ್ತಿರುವ ರಾಜ್ಯಗಳಿಗೆ ಹೆಚ್ಚಿನ ಸ್ಥಾನಗಳು ಸಿಗಬಹುದು ಎಂಬ ಆತಂಕ ದಕ್ಷಿಣ ಭಾರತದಲ್ಲಿ ವ್ಯಕ್ತವಾಗುತ್ತಿದೆ. ಇದಕ್ಕೆ ವಿರುದ್ಧವಾಗಿ, ಜನಸಂಖ್ಯೆ ನಿಯಂತ್ರಣಕ್ಕೆ ಆದ್ಯತೆ ನೀಡಿದ ರಾಜ್ಯಗಳ ಲೋಕಸಭಾ ಪ್ರಾತಿನಿಧ್ಯದ ಪಾಲು ಕುಗ್ಗುವ ಸಾಧ್ಯತೆಯಿದೆ.
ಇದು ಕೇವಲ ದಕ್ಷಿಣ ಮತ್ತು ಉತ್ತರ ಭಾರತದ ನಡುವಿನ ವಿವಾದವಲ್ಲ. ಜನಸಂಖ್ಯೆ ನಿಯಂತ್ರಣದಂತಹ ರಾಷ್ಟ್ರೀಯ ಗುರಿ ಸಾಧಿಸಿದ ರಾಜ್ಯಗಳು ತಮ್ಮ ರಾಜಕೀಯ ಪ್ರಾತಿನಿಧ್ಯದಲ್ಲಿ ತೊಂದರೆ ಅನುಭವಿಸಬೇಕಾಗಿದೆ. ಒಂದು ರಾಜ್ಯವು ಜನಸಂಖ್ಯೆ ನಿಯಂತ್ರಣಕ್ಕೆ ಯಶಸ್ವಿಯಾಗಿ ಶ್ರಮಿಸಿದರೆ, ಅದರ ಸಾಧನೆಗೆ ಶಿಕ್ಷೆಯ ರೂಪದಲ್ಲಿ ಕಡಿಮೆ ರಾಜಕೀಯ ಪ್ರಾತಿನಿಧ್ಯ ದೊರೆಯುವಂತಾಗಬಾರದು. ಅದೇ ವೇಳೆ, ಹೆಚ್ಚಿನ ಜನಸಂಖ್ಯೆ ಹೊಂದಿರುವ ಪ್ರದೇಶಗಳ ನಾಗರಿಕರಿಗೂ ಸಮರ್ಪಕ ಪ್ರಾತಿನಿಧ್ಯ ದೊರೆಯಬೇಕು. ಈ ಎರಡೂ ತತ್ವಗಳ ನಡುವೆ ಸಮತೋಲನ ಸಾಧಿಸುವುದು ಸಂವಿಧಾನಾತ್ಮಕವಾಗಿ ಅತ್ಯಂತ ಮುಖ್ಯವಾಗಿದೆ.
ಸಂವಿಧಾನ ಜನಪ್ರಾತಿನಿಧ್ಯ ಮತ್ತು ಒಕ್ಕೂಟ ವ್ಯವಸ್ಥೆಗೆ ಹೆಚ್ಚಿನ ಮಹತ್ವ ನೀಡಿದೆ. ಲೋಕಸಭೆಯಲ್ಲಿ ರಾಜ್ಯಗಳಿಗೆ ಎಷ್ಟು ಸ್ಥಾನಗಳು ದೊರೆಯಬೇಕು ಎಂಬ ಪ್ರಶ್ನೆ ಜನಸಂಖ್ಯೆಗೆ ಮಾತ್ರ ಸೀಮಿತವಾಗದೆ, ದೇಶದ ಪ್ರಾದೇಶಿಕ ಸಮತೋಲನ ಮತ್ತು ಪ್ರಜಾಪ್ರಭುತ್ವದ ಸಮಾನತೆಯ ದೃಷ್ಟಿಯಿಂದಲೂ ಚರ್ಚೆಯಾಗಬೇಕಿದೆ. ಸಂವಿಧಾನದ 81ನೇ ವಿಧಿಯು ಲೋಕಸಭೆಯ ರಚನೆ ಮತ್ತು ರಾಜ್ಯಗಳ ಪ್ರಾತಿನಿಧ್ಯಕ್ಕೆ ಸಂಬಂಧಿಸಿದೆ. 82ನೇ ವಿಧಿಯು ಪ್ರತಿ ಜನಗಣತಿಯ ನಂತರ ಕ್ಷೇತ್ರಗಳ ಮರುಹೊಂದಾಣಿಕೆಗೆ ಸಂಬಂಧಿಸಿದ ವ್ಯವಸ್ಥೆಯನ್ನು ಒಳಗೊಂಡಿದೆ. ಆದರೆ ಈ ಪ್ರಕ್ರಿಯೆ ಸಂವಿಧಾನಾತ್ಮಕ ತಿದ್ದುಪಡಿಗಳು ಮತ್ತು ಜಾರಿಯಲ್ಲಿರುವ ನಿರ್ಬಂಧಗಳಿಗೆ ಒಳಪಟ್ಟಿದೆ. ಪ್ರಸ್ತುತ ವ್ಯವಸ್ಥೆಯ ಪ್ರಕಾರ, 2027ರಲ್ಲಿ ನಡೆಯುವ ಜನಗಣತಿ ಸಂಬಂಧಿತ ಅಂಕಿಅಂಶಗಳು ಪ್ರಕಟವಾಗುವವರೆಗೆ ಕ್ಷೇತ್ರಗಳ ಮರುಹೊಂದಾಣಿಕೆಗೆ ನಿರ್ದಿಷ್ಟ ನಿರ್ಬಂಧಗಳಿವೆ.
ಹೀಗಾಗಿ ಜನಗಣತಿ ಮುಗಿದ ತಕ್ಷಣವೇ ಲೋಕಸಭಾ ಕ್ಷೇತ್ರಗಳ ವ್ಯಾಪ್ತಿಯನ್ನು ಬದಲಾಯಿಸಲಾಗುತ್ತದೆ. ಇದಕ್ಕಾಗಿ ಜನಗಣತಿಯ ಅಂಕಿ ಅಂಶಗಳನ್ನು ಬಳಸಲಾಗುತ್ತದೆ, ಕ್ಷೇತ್ರ ಪುನರ್ವಿಂಗಡಣೆಯ ಕಾನೂನುಬದ್ಧ ಚೌಕಟ್ಟು ಏನಾಗಿರುತ್ತದೆ ಮತ್ತು ಲೋಕಸಭೆಯ ಒಟ್ಟು ಸ್ಥಾನಗಳಲ್ಲಿ ಬದಲಾವಣೆ ಮಾಡಲಾಗುತ್ತದೆಯೇ ಎಂಬುದನ್ನು ಸ್ಪಷ್ಟವಾದ ಸಂವಿಧಾನಾತ್ಮಕ ಹಾಗೂ ಕಾನೂನುಬದ್ಧ ನಿರ್ಧಾರಗಳು ನಿರ್ಧರಿಸಲಿವೆ. ಆದರೆ ಈ ಪ್ರಕ್ರಿಯೆ ಆರಂಭವಾಗುವ ಮೊದಲೇ ದಕ್ಷಿಣ ಭಾರತದ ರಾಜ್ಯಗಳ ಆತಂಕಗಳಿಗೆ ಉತ್ತರ ನೀಡುವುದು ಅಗತ್ಯವಾಗಿದೆ.
ಲೋಕಸಭೆಯ ಸ್ಥಾನಗಳ ಹಂಚಿಕೆಯಲ್ಲಿ ದೊಡ್ಡ ಪ್ರಮಾಣದ ಬದಲಾವಣೆಗಳಾದರೆ, ವಿವಿಧ ರಾಜ್ಯಗಳ ಸಂಸತ್ತಿನಲ್ಲಿನ ರಾಜಕೀಯ ಪ್ರಭಾವವೂ ಬದಲಾಗಬಹುದು. ಕೆಲವು ರಾಜ್ಯಗಳ ಸ್ಥಾನಗಳ ಸಂಖ್ಯೆ ಹೆಚ್ಚಿದರೆ, ಇತರ ರಾಜ್ಯಗಳ ಸ್ಥಾನಗಳ ಸಂಖ್ಯೆಯೂ ಅದೇ ಪ್ರಮಾಣದಲ್ಲಿ ಹೆಚ್ಚದಿದ್ದಲ್ಲಿ, ಒಟ್ಟು ಲೋಕಸಭೆಯಲ್ಲಿ ಅವುಗಳ ಪಾಲು ಕುಗ್ಗಬಹುದು. ಇದರಿಂದ ಕೇಂದ್ರ ಸರ್ಕಾರದ ನೀತಿ ನಿರ್ಧಾರಗಳು, ಹಣಕಾಸು ಹಂಚಿಕೆ, ಮೂಲಸೌಕರ್ಯ ಯೋಜನೆಗಳು, ತೆರಿಗೆ ನೀತಿ ಮತ್ತು ರಾಷ್ಟ್ರೀಯ ಅಭಿವೃದ್ಧಿಯ ಆದ್ಯತೆ ಕ್ಷೀಣಿಸಲಿದೆ. ಆದರೆ ಕ್ಷೇತ್ರ ಪುನರ್ವಿಂಗಡಣೆ ನಿಜವಾದ ಪರಿಣಾಮವು ಸ್ಥಾನಗಳ ಒಟ್ಟು ಸಂಖ್ಯೆ, ಹಂಚಿಕೆಯ ಸೂತ್ರ ಮತ್ತು ಸಂವಿಧಾನಾತ್ಮಕ ಭದ್ರತೆಗಳ ಮೇಲೆ ಅವಲಂಬಿತವಾಗಿರುತ್ತದೆ.
ದೇಶದ ಅಭಿವೃದ್ಧಿಗೆ ಕೊಡುಗೆ ನೀಡಿದ ರಾಜ್ಯಗಳು ತಮ್ಮ ಸಾಧನೆಗಳಿಂದಾಗಿ ರಾಷ್ಟ್ರೀಯ ನಿರ್ಧಾರ ಪ್ರಕ್ರಿಯೆಯಲ್ಲಿ ಹಿಂದುಳಿಯುವ ಪರಿಸ್ಥಿತಿ ನಿರ್ಮಾಣವಾಗಬಾರದು. ತೆರಿಗೆ ಪಾವತಿಸುವ ರಾಜ್ಯಗಳಿಗೆ ಪ್ರಾತಿನಿಧ್ಯದ ನ್ಯಾಯ ಬೇಕು. ಕರ್ನಾಟಕ, ತಮಿಳುನಾಡು, ಕೇರಳ, ತೆಲಂಗಾಣ ಮತ್ತು ಆಂಧ್ರಪ್ರದೇಶಗಳು ಕೈಗಾರಿಕೆ, ಸೇವಾ ವಲಯ, ಮಾಹಿತಿ ತಂತ್ರಜ್ಞಾನ, ಶಿಕ್ಷಣ, ಆರೋಗ್ಯ, ರಫ್ತು ಮತ್ತು ಉದ್ಯಮಶೀಲತೆಯ ಮೂಲಕ ರಾಷ್ಟ್ರೀಯ ಆರ್ಥಿಕತೆಗೆ ಕೊಡುಗೆ ನೀಡುತ್ತಿವೆ. ಈ ರಾಜ್ಯಗಳ ಆರ್ಥಿಕ ಕೊಡುಗೆ ಮತ್ತು ಕೇಂದ್ರದಿಂದ ದೊರೆಯುವ ಹಣಕಾಸಿನ ಹಂಚಿಕೆ ನಡುವಿನ ಸಂಬಂಧವೂ ಸಾರ್ವಜನಿಕ ಚರ್ಚೆಯ ಪ್ರಮುಖ ವಿಷಯವಾಗಿದೆ.
ಆದರೆ ಲೋಕಸಭಾ ಕ್ಷೇತ್ರಗಳ ಹಂಚಿಕೆ ಮತ್ತು ಕೇಂದ್ರ ತೆರಿಗೆಗಳ ಹಂಚಿಕೆ ಎರಡು ವಿಭಿನ್ನ ಸಾಂವಿಧಾನಿಕ ಪ್ರಕ್ರಿಯೆಗಳು. ಎರಡನ್ನೂ ಒಂದೇ ಮಾನದಂಡದ ಆಧಾರದಲ್ಲಿ ನಿರ್ಧರಿಸಲಾಗುವುದಿಲ್ಲ. ಆದರೂ ಜನಸಂಖ್ಯೆ ನಿಯಂತ್ರಣ, ಆರ್ಥಿಕ ಬೆಳವಣಿಗೆ ಮತ್ತು ಮಾನವ ಅಭಿವೃದ್ಧಿಯ ಸಾಧನೆಗಳನ್ನು ಪ್ರಾದೇಶಿಕ ನ್ಯಾಯದ ವಿಶಾಲ ಚರ್ಚೆಯಲ್ಲಿ ಪರಿಗಣಿಸಬೇಕೆಂಬ ಬೇಡಿಕೆಗೆ ಮಹತ್ವವಿದೆ. ಒಂದು ರಾಜ್ಯ ರಾಷ್ಟ್ರೀಯ ಆರ್ಥಿಕತೆಗೆ ಹೆಚ್ಚಿನ ಕೊಡುಗೆ ನೀಡಿದರೂ, ಮತ್ತೊಂದು ರಾಜ್ಯದ ಜನಸಂಖ್ಯೆ ಹೆಚ್ಚು ಎಂಬ ಒಂದೇ ಕಾರಣಕ್ಕೆ ಅದರ ರಾಜಕೀಯ ಪ್ರಾತಿನಿಧ್ಯದ ಪಾಲು ಕಡಿಮೆಯಾಗುವಂತಾಗಬಾರದು. ಈ ಆತಂಕವನ್ನು ಕೇವಲ ಪ್ರಾದೇಶಿಕ ರಾಜಕೀಯವೆಂದು ತಳ್ಳಿಹಾಕುವ ಬದಲು, ಸಮತೋಲಿತ ಒಕ್ಕೂಟ ವ್ಯವಸ್ಥೆಯ ದೃಷ್ಟಿಯಿಂದ ಚರ್ಚಿಸಬೇಕಾಗಿದೆ.
ಮಹಿಳೆಯರಿಗೆ ಲೋಕಸಭೆ ಮತ್ತು ವಿಧಾನಸಭೆಗಳಲ್ಲಿ ಶೇ.33ರಷ್ಟು ಮೀಸಲಾತಿ ಕಲ್ಪಿಸುವ ಸಂವಿಧಾನದ 106ನೇ ತಿದ್ದುಪಡಿ ಕಾಯ್ದೆ, 2023, ಕ್ಷೇತ್ರಗಳ ಪುನರ್ವಿಂಗಡಣೆ ಮತ್ತು ಸಂಬಂಧಿತ ಜನಗಣತಿ ಪ್ರಕ್ರಿಯೆಯೊಂದಿಗೆ ಜೋಡಿಸಲ್ಪಟ್ಟಿದೆ. ಈ ಮೀಸಲಾತಿ ಜಾರಿಗೆ ಬರುವ ಕಾಲಮಾನ ಮತ್ತು ಕ್ಷೇತ್ರ ಪುನರ್ವಿಂಗಡಣೆಯ ವಿಧಾನವು ದೇಶದ ಚುನಾವಣಾ ವ್ಯವಸ್ಥೆಯ ಮುಂದಿನ ರೂಪವನ್ನು ನಿರ್ಧರಿಸುವ ಪ್ರಮುಖ ಅಂಶಗಳಾಗಿವೆ. ಮಹಿಳೆಯರಿಗೆ ರಾಜಕೀಯ ಪ್ರಾತಿನಿಧ್ಯ ಹೆಚ್ಚಿಸುವುದು ಸ್ವಾಗತಾರ್ಹ. ಆದರೆ ಮಹಿಳಾ ಮೀಸಲಾತಿಯನ್ನು ಜಾರಿಗೊಳಿಸುವ ಸಂದರ್ಭದಲ್ಲಿ ಪ್ರಾದೇಶಿಕ ಪ್ರಾತಿನಿಧ್ಯದ ಸಮತೋಲನವನ್ನೂ ಕಾಪಾಡಬೇಕು. ಒಂದು ನ್ಯಾಯವನ್ನು ಸಾಧಿಸುವ ಪ್ರಯತ್ನದಲ್ಲಿ ಮತ್ತೊಂದು ಪ್ರಾದೇಶಿಕ ನ್ಯಾಯದ ಪ್ರಶ್ನೆ ನಿರ್ಲಕ್ಷ್ಯಕ್ಕೆ ಒಳಗಾಗಬಾರದು.
ಕ್ಷೇತ್ರ ಪುನರ್ವಿಂಗಡಣೆಯ ಕುರಿತು ದಕ್ಷಿಣ ಭಾರತದ ಆತಂಕಗಳಿಗೆ ಪರಿಹಾರ ಕಂಡುಕೊಳ್ಳಲು ಕೆಲವು ಪ್ರಮುಖ ಅಂಶಗಳನ್ನು ಪರಿಗಣಿಸಬೇಕು. ಜನಸಂಖ್ಯೆಯ ಆಧಾರದಲ್ಲಿ ಪ್ರಾತಿನಿಧ್ಯವನ್ನು ಮರುನಿರ್ಧರಿಸುವಾಗ ಜನಸಂಖ್ಯೆ ನಿಯಂತ್ರಣದಲ್ಲಿ ಸಾಧನೆ ಮಾಡಿದ ರಾಜ್ಯಗಳ ಹಿತಾಸಕ್ತಿಗೆ ರಕ್ಷಣೆ ಒದಗಿಸುವ ಸೂಕ್ತ ವ್ಯವಸ್ಥೆಯ ಕುರಿತು ರಾಷ್ಟ್ರೀಯ ಮಟ್ಟದಲ್ಲಿ ಚರ್ಚೆಯಾಗಬೇಕು. ಲೋಕಸಭೆಯ ಒಟ್ಟು ಸ್ಥಾನಗಳನ್ನು ಹೆಚ್ಚಿಸುವುದು, ರಾಜ್ಯಗಳ ಪ್ರಾತಿನಿಧ್ಯದ ಪಾಲನ್ನು ಸಮತೋಲನಗೊಳಿಸುವುದು ಅಥವಾ ಇತರ ಸಂವಿಧಾನಾತ್ಮಕ ಆಯ್ಕೆಗಳನ್ನು ಪರಿಗಣಿಸುವ ಯಾವುದೇ ನಿರ್ಧಾರವಾದರೂ ಅದರ ಪರಿಣಾಮಗಳ ಬಗ್ಗೆ ಮುಂಚಿತವಾಗಿ ಸಾರ್ವಜನಿಕ ಚರ್ಚೆ ನಡೆಯಬೇಕು. ದಕ್ಷಿಣ ಭಾರತದ ರಾಜ್ಯಗಳು ಮಾತ್ರವಲ್ಲದೆ ಎಲ್ಲ ರಾಜ್ಯಗಳ ಪ್ರತಿನಿಧಿಗಳು, ಸಂವಿಧಾನ ತಜ್ಞರು, ಚುನಾವಣಾ ಆಯೋಗ ಮತ್ತು ಸಂಬಂಧಿತ ಸಂಸ್ಥೆಗಳ ಪಾಲ್ಗೊಳ್ಳುವಿಕೆಯಲ್ಲಿ ಪಾರದರ್ಶಕ ಸಂವಾದ ನಡೆಯಬೇಕು.
ಎಸ್.ಐ.ಆರ್. ಪ್ರಕ್ರಿಯೆಯಲ್ಲಿ ಅರ್ಹ ಮತದಾರರ ಹೆಸರುಗಳು ಕೈಬಿಡದಂತೆ ಸೂಕ್ತ ಪರಿಶೀಲನೆ, ಆಕ್ಷೇಪಣೆ ಸಲ್ಲಿಸುವ ಅವಕಾಶ ಮತ್ತು ಮೇಲ್ಮನವಿ ವ್ಯವಸ್ಥೆಗಳು ಪರಿಣಾಮಕಾರಿಯಾಗಿ ಕಾರ್ಯನಿರ್ವಹಿಸಬೇಕು. ಮತದಾರರ ಹಕ್ಕುಗಳ ರಕ್ಷಣೆ ಮತ್ತು ಕ್ಷೇತ್ರಗಳ ಮರುಹೊಂದಾಣಿಕೆ ಎರಡು ಪ್ರತ್ಯೇಕವಾದರೂ ಪ್ರಜಾಪ್ರಭುತ್ವದ ಗುಣಮಟ್ಟಕ್ಕೆ ಸಂಬಂಧಿಸಿದ ಮಹತ್ವದ ವಿಷಯಗಳಾಗಿವೆ. ಕ್ಷೇತ್ರ ಪುನರ್ವಿಂಗಡಣೆಯ ಮಾನದಂಡಗಳು ಮತ್ತು ಅವುಗಳ ರಾಜ್ಯವಾರು ಪರಿಣಾಮಗಳನ್ನು ಸ್ಪಷ್ಟವಾಗಿ ಸಾರ್ವಜನಿಕರ ಮುಂದಿಡಬೇಕು. ಜನಸಂಖ್ಯೆ, ಪ್ರಾದೇಶಿಕ ಸಮತೋಲನ, ಪ್ರತಿನಿಧಿತ್ವದ ಸಮಾನತೆ ಮತ್ತು ಒಕ್ಕೂಟ ವ್ಯವಸ್ಥೆಯ ಸ್ಥಿರತೆ, ಇವೆಲ್ಲವನ್ನೂ ಪರಿಗಣಿಸುವ ಚೌಕಟ್ಟು ಅಗತ್ಯವಾಗಿದೆ.
ಎಸ್.ಐ.ಆರ್., ಜನಗಣತಿ ಮತ್ತು ಕ್ಷೇತ್ರ ಪುನರ್ವಿಂಗಡಣೆಯ ಪ್ರಕ್ರಿಯೆಗಳು ದೇಶದ ಚುನಾವಣಾ ವ್ಯವಸ್ಥೆಯ ಭವಿಷ್ಯವನ್ನು ರೂಪಿಸುವ ಸಾಮರ್ಥ್ಯ ಹೊಂದಿವೆ. ಅದೇ ರೀತಿ, ದಕ್ಷಿಣ ಭಾರತದ ಆತಂಕಗಳಿಗೆ ಯಾವುದೇ ಆಧಾರವಿಲ್ಲ ಎಂದು ನಿರ್ಲಕ್ಷಿಸುವುದು ಸೂಕ್ತವಲ್ಲ. ಜನಸಂಖ್ಯೆ ನಿಯಂತ್ರಣ, ಶಿಕ್ಷಣ, ಆರೋಗ್ಯ, ಆರ್ಥಿಕ ಬೆಳವಣಿಗೆ ಮತ್ತು ಆಡಳಿತಾತ್ಮಕ ಸುಧಾರಣೆಗಳಲ್ಲಿ ರಾಜ್ಯಗಳು ಮಾಡಿದ ಸಾಧನೆಗಳಿಗೆ ಸೂಕ್ತ ಗೌರವ ದೊರೆಯಬೇಕು. ಅದೇ ಸಮಯದಲ್ಲಿ, ಹೆಚ್ಚಿನ ಜನಸಂಖ್ಯೆ ಹೊಂದಿರುವ ರಾಜ್ಯಗಳ ನಾಗರಿಕರಿಗೂ ನ್ಯಾಯಸಮ್ಮತ ಪ್ರಾತಿನಿಧ್ಯ ಒದಗಿಸುವ ಹೊಣೆಗಾರಿಕೆಯನ್ನು ಕೇಂದ್ರ ಸರ್ಕಾರ ಹೊರಬೇಕು. ಭಾರತದ ಒಕ್ಕೂಟ ವ್ಯವಸ್ಥೆಯ ಶಕ್ತಿ ಅದರ ವೈವಿಧ್ಯತೆಯಲ್ಲಿ ಅಡಗಿದೆ. ಉತ್ತರ ಭಾರತದ ರಾಜ್ಯಗಳ ಹಿತಾಸಕ್ತಿಯೂ ಮುಖ್ಯ, ದಕ್ಷಿಣ ಭಾರತದ ರಾಜ್ಯಗಳ ಹಿತಾಸಕ್ತಿಯೂ ಅಷ್ಟೇ ಮುಖ್ಯ. ಯಾವುದೇ ಪ್ರದೇಶದ ಧ್ವನಿ ದುರ್ಬಲಗೊಳ್ಳದಂತೆ, ಯಾವುದೇ ರಾಜ್ಯಕ್ಕೂ ತೊಂದರೆಯಾಗದಂತೆ ನೋಡಿಕೊಳ್ಳಲು ಕಾರ್ಯೋನ್ಮುಖರಾಗಬೇಕು.



